ಇನ್ನಾದರೂ ಕಾಂಗ್ರೆಸ್ಸ್ ನ ನಿಲುವುಗಳು ಬದಲಾಗಲಿ

ಆತ್ಮೀಯರೇ,

ಶಿವಮೊಗ್ಗದಲ್ಲಿ ನಡೆದ ಪ್ರಕರಣದ ಬಗ್ಗೆ ಗಂಭೀರವಾಗಿ ಯೋಚಿಸಲೇ ಬೇಕಾಗಿದೆ. ಶಾಂತಿಗೆ ಹೆಸರಾದ ನಮ್ಮ ಸಮಾಜದಲ್ಲಿ ತಮ್ಮ ಸ್ವಾರ್ಥಕ್ಕಾಗಿ ಗಲಭೆಗಳನ್ನು ಉಂಟು ಮಾಡುತ್ತಿರುವ ದುಷ್ಟ ಶಕ್ತಿಗಳನ್ನು ಹತ್ತಿಕ್ಕುವ ಬಗ್ಗೆ ನಿರ್ದಾಕ್ಷಿಣ್ಯ ಕ್ರಮಗಳನ್ನು ರಾಜ್ಯ ಸರಕಾರ ಕೈಗೊಳ್ಳಲೇ ಬೇಕಾಗಿದೆ.

ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸುತ್ತೇನೆಂದು ಹೇಳಿಕೊಳ್ಳುತ್ತಾ ಕಂದಕಗಳನ್ನು ಹಚ್ಚಿಸುತ್ತಾ, ಗಲಭೆಗಳ ಮೂಲಕ ಅಮಾಯಕರ ಪ್ರಾಣ ಹಾನಿಗೆ ಕಾರಣವಾಗಿರುವ ಪಾಪ್ಯುಲರ್ ನಂತಹ ಸಂಘಟನೆಯ ಬಗ್ಗೆ ಸರಕಾರ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಭಾರೀ ಬೆಲೆಯನ್ನೇ ತೆರೆಬೇಕಾಗುತ್ತದೆ.

ಪ್ರಜಾಪ್ರಭುತ್ವವನ್ನು ಗೌರವಿಸುವ ಎಲ್ಲರಿಗೂ ಭಾರತದಂತಹ ದೇಶದಲ್ಲಿ ತಮ್ಮ ಅಭಿಪ್ರಾಯಗಳನ್ನು ಹೇಳುವ ಸ್ವಾತಂತ್ರ್ಯವಿದೆ. ಆದರೆ ಈ ಸ್ವಾತಂತ್ರ್ಯ ಬೇರೆಯವರ ಭಾವನೆಗಳ ಜೊತೆ, ಬೇರೆಯವರ ಪ್ರಾಣಗಳ ಜೊತೆ ಚೆಲ್ಲಾಟವಾಡಲು ಅಲ್ಲ. ಶಿವಮೊಗ್ಗದಲ್ಲಿ ನಡೆದಿದ್ದು ಇದೇ. ಪಾಪ್ಯುಲರ್ ಫ್ರಂಟ್ ನ ಕಾರ್ಯಕರ್ತರಿಗೆ ಸ್ವಾತಂತ್ರ್ಯವಿದ್ದಿದ್ದು, ಪೋಲೀಸರಿಂದ ಅನುಮತಿ ನೀಡಿದ್ದು ಮೆರವಣಿಗೆ ನಡೆಸಲು ಮಾತ್ರ, ಆದರೆ ಅದರ ಕಾರ್ಯಕರ್ತರು ಮಾಡಿದ್ದಾದರೂ ಏನು?, ಕೂಗಿದ್ದು ಆರ್ ಎಸ್ ಎಸ್ ನ ವಿರುದ್ದ ಘೋಷಣೆಗಳನ್ನು. ಇದು ಉದ್ಢಟತನವಲ್ಲವೇ? ಗಲಭೆಗಳನ್ನು ಉಂಟು ಮಾಡಲೇ ಬೇಕೆಂಬ ಹುನ್ನಾರವಲ್ಲವೇ? ಇವರ ಮೆರವಣಿಗೆಯ, ಅಥವಾ ಇವರ ಸಮಾವೇಶದ ಉದ್ದೇಶ ತಮ್ಮ ವಿಚಾರವನ್ನು ಹೇಳುವುದಾಗಿತ್ತೋ? ಅಥವಾ ಆರ್ ಎಸ್ ಎಸ್ ವಿರುದ್ಧ ಘೋಷಣೆಗಳನ್ನು ಕೂಗಿ ಗಲಭೆಗಳನ್ನು ಉಂಟು ಮಾಡುವುದಾಗಿತ್ತೋ?, ಮಂಗಳೂರಿನಿಂದ, ಕೇರಳದಿಂದ ಗಲಭೆ ಉಂಟು ಮಾಡುವ ಯೋಜನೆ ಪೂರ್ವ ನಿಯೋಜಿತವೇ? ಸ್ಪಷ್ಟವಾಗಿ ತನಿಖೆಯಾಗಲೇ ಬೇಕು.

ಇನ್ನು ಇಂತಹ ಸಂಘಟನೆಗಳು ನಡೆಸುವ ಚಟುವಟಿಕೆಗಳ ಬಗ್ಗೆ ನಿಗಾ ಇಡಬೇಕಾದ ರಾಜ್ಯ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಪಾಪ್ಯಲರ್ ಫ್ರಂಟ್ ನಂತಹ ಸಂಘಟನೆಯ ಚಟುವಟಿಕೆಗಳನ್ನು ಮೊದಲೇ ಗ್ರಹಿಸುವಲ್ಲಿ ರಾಜ್ಯ ಗುಪ್ತಚರ ಇಲಾಖೆಯ ನಿಷ್ಕ್ರಿಯತೆ ಜಗಜ್ಜಾಹೀರಾಗಿದೆ. ಶಾಂತಿಯುತವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವ ಹಿಂದೂ ಸಂಘಟನೆಗಳ ಮೇಲೆ ಅನುಮಾನಾಸ್ಪದ ಕಣ್ಣಿನಿಂದ ನೋಡುವ ಸರಕಾರದ ಕಣ್ಣಿಗೆ ಪಾಪ್ಯುಲರ್ ಫ್ರಂಟ್ ನಂತಹ ಸಂಘನೆಗಳ ಚಟುವಟಿಕೆಗಳನ್ನು ನೋಡುವಾಗ ಮಾತ್ರ ಜಾಣ ಕುರುಡು ಬರುತ್ತದೆ.

ಈ ಕಾಮಾಲೆ ಕಣ್ಣಿನ ರೋಗ ಈ ಸರಕಾರಕ್ಕೆ ಹೊಸದೇನಲ್ಲ. ಅಕ್ರಮವಾಗಿ ಗೋಸಾಗಣೆ ಮಾಡುವವರಿಗೆ, ಅಲ್ಪಸಂಖ್ಯಾತನೆಂಬ ಒಂದೇ ಕಾರಣದಿಂದ ರಕ್ಷಣೆ ನೀಡುವ, ಅದೇ ಕಾರಣದಿಂದ ಲಕ್ಷಾಂತರ ರೂ ಪರಿಹಾರವನ್ನು ನೀಡುವ, ರೌಡಿಯೊಬ್ಬನಿಂದ ಹತನಾದ ಮಲ್ಲಿಕಾರ್ಜುನ ಬಂಡೆಯಂತಹ ಅಧಿಕಾರಿಗೆ ನೆರವು ನೀಡಲು ಮೀನಾಮೇಷ ಎಣಿಸುವ ಇಂತಹ ಸರಕಾರದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ತಮ್ಮ ಇಲಾಖೆಯನ್ನು ನಿರ್ವಹಿಸಲು ಸಂಪೂರ್ಣವಾಗಿ ವಿಫಲವಾಗಿರುವ ಸಚಿವ ಕೆ.ಜೆ.ಜಾರ್ಜರವರ ಕಾರ್ಯ ವೈಖರಿಯೇ ರಾಜ್ಯದಲ್ಲಿ ನಡೆಯುತ್ತಿರುವ ಈ ಎಲ್ಲಾ ಅನಾಹುತಗಳಿಗೆ ಕಾರಣ ಎಂಬುದು ಮಾನ್ಯ ಮುಖ್ಯ ಮಂತ್ರಿಗಳಿಗೆ ಅರಿವಿಲ್ಲದಿರುವುದು ರಾಜ್ಯದ ದುರ್ಭಾಗ್ಯದ ಸಂಗತಿ.

ಬೆಂಗಳೂರಿನ ಎಟಿಎಂನಲ್ಲಿ ಮಹಿಳೆಯನ್ನು ಹತ್ಯೆ ಮಾಡಿದ ಆರೋಪಿಯನ್ನು ಹಿಡಿಯಲು ವಿಫಲವಾಗಿರುವ, ರಾಜ್ಯದಲ್ಲಿ ನಿರಂತರವಾಗಿ ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ನಿಯಂತ್ರಿಸಲು ವಿಫಲವಾಗಿರುವ, ಮಂತ್ರಿಗಳ ವಿರದ್ಧವೇ ಸೆಟೆದು ನಿಂತ ಅಧಿಕಾರಿಗಳನ್ನು ಹತೋಟಿಯಲ್ಲಿಟ್ಟು ಕೊಳ್ಳಲು ಅಸಮರ್ಥರಾದ ಕೆ.ಜೆ.ಜಾರ್ಜ್ ತಮ್ಮ ಇಲಾಖೆಯನ್ನು ಸಮರ್ಥವಾಗಿ ನಿರ್ವಸಿಲು ವಿಫಲವಾಗಿರುವ ಇಂತಹ ಹೋಮ್ ಮಿನಿಸ್ಟರ್ ನ್ನು ಇನ್ನೂ ಸಚಿವರಾಗಿ ಮುಂದುವರೆಸುವಲ್ಲಿ ಶ್ರೀ ಸಿದ್ದರಾಮಯ್ಯನವರ ಮೇಲೆ ಇರುವ ಒತ್ತಡ ಕಾರಣವಿರಬಹುದು. ಆದರೆ ಇದರ ಫಲ ಉಣ್ಣುತ್ತಿರುವುದು ರಾಜ್ಯದ ಜನತೆ.

ಈ ಎಲ್ಲಾ ಅಂಶಗಳಿಗೂ ಒಂದು ಕೊನೆಗಾಣಿಸಬೇಕಾದ ಜವಾಬ್ದಾರಿ ನಮ್ಮ ಮೇಲೆಯೇ ಇದೆ. ನಮ್ಮೆದುರಿಗೆ ಇಂತಹ ಅರಾಜಕತೆಗೆ ಕಾರಣವಾಗಿರುವ ಆಡಳಿತವನ್ನು ಸರಿದಾರಿಗೆ ತರುವ ಹೊಣೆಗಾರಿಕೆಯೂ ನಮ್ಮದೇ. ಆ ನಿಟ್ಟಿನಲ್ಲಿ ಜನತೆಯನ್ನು ಜಾಗ್ರ‍ತ ಮಾಡುವ ಕಾರ್ಯದಲ್ಲಿ ಸಹಭಾಗಿಗಳಾಗಲೇ ಬೇಕು. ಸಜ್ಜನರ ನಿಷ್ಕ್ರಿಯತೆಯೇ ದುರ್ಜನರ ಕ್ರಿಯೆಗಳು ಹೆಚ್ಚಾಗಲು ಕಾರಣವಾಗುತ್ತದೆ ಎಂಬ ಹಿರಿಯರ ನುಡಿಯನ್ನೊಮ್ಮೆ ಸ್ಮರಿಸೋಣ. ಸುಶಾಸನದತ್ತ ಕರ್ನಾಟಕವನ್ನು ಕೊಂಡೊಯ್ಯುವಲ್ಲಿ ನಮ್ಮೆಲ್ಲಾ ಯೋಗದಾನವನ್ನು ನೀಡೋಣ.

ಒಂದು ಮಾತು

ಫೆಬ್ರವರಿ ತಿಂಗಳು ಶಿವಮೊಗ್ಗ ನಗರದಲ್ಲಿ ನಡೆದ ಎರಡು ಕಾರ್ಯಕ್ರಮಗಳು ವಿಭಿನ್ನವಾದ ಎರಡು ಘಟನೆಗಳಿಗೆ ಸಾಕ್ಷಿಯಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘ ಆಯೋಜಿಸಿದ್ದ ಪಥ ಸಂಚಲನದಲ್ಲಿ ಭಾಗವಹಿಸಿದ್ದ ಸ್ವಯಂಸೇವಕರು ಘೋಷಣೆಗಳನ್ನು ಕೂಗುತ್ತಿರಲಿಲ್ಲ, ಅವರ ನಡೆ ನುಡಿಗಳೇ ಅವರಲ್ಲಿನ ದೇಶಪ್ರೇಮಕ್ಕೆ ಸಾಕ್ಷಿಯಾಗಿತ್ತು. ಇದರಿಂದ ಪ್ರೇರಿತರಾದ ಜನತೆ ಸ್ವಯಂಸೇವಕರ ಮೇಲೆ ಪುಷ್ಪಾರ್ಚನೆ ಮಾಡುತ್ತಿದ್ದರು. ತಾವೂ ದೇಶಕ್ಕಾಗಿ ದುಡಿಯಬೇಕೆನ್ನುವ ತುಡಿತ ಇವರ ಮನದಲ್ಲಿ ಮೂಡಲು ಈ ಕಾರ್ಯಕ್ರಮ ಅನುವಾಗಿತ್ತು.

ಆದರೆ…. ಫೆಬ್ರವರಿ ೧೯ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಆಶ್ರಯದಲ್ಲಿ ನಡೆದೆ ಮೆರವಣಿಗೆಯ ಉದ್ದೇಶ ಅವರು ಮೆರವಣಿಗೆಯಲ್ಲಿ ಕೂಗಿದ ಘೋಷಣೆಯಿಂದಲೇ ವ್ಯಕ್ತವಾಗುತ್ತಿತ್ತು. ಏಕತೆ ಹೆಸರಿನಲ್ಲಿ ನಡೆದ ಈ ಮೆರವಣಿಗೆಯ ಪರಿಣಾಮ ಶಿವಮೊಗ್ಗ ಹತ್ತಿ ಉರಿಯಿತು. ಅಮಾಯಕರ ಹತ್ಯೆಯಾಯಿತು. ಏಕತೆಯ ಹೆಸರಿನಲ್ಲಿ ನಡೆದ ಕಾರ್ಯಕ್ರಮದಿಂದ ಸಾಮರಸ್ಯ ಭಂಗವಾಯಿತು.

ಹೇಳಿ, ಕೋಮುವಾದಿಗಳು ಯಾರು? ಸಮಾಜದ ಹಿತ ಬಯಸುವವರು ಯಾರು?, ಸಂಘಟನೆಗಳಿರುವುದು ಸಮಾಜದ ಹಿತಕ್ಕಾಗೋ, ಸಮಾಜದ ಸಾಮರಸ್ಯವನ್ನು ಕದಡಿ ತಮ್ಮ ಸ್ವಾರ್ಥತೆಯ ಬೇಳೆ ಬೇಯಿಸಿಕೊಳ್ಳುವುದಕ್ಕೋ? ತೀರ್ಮಾನಿಸಬೇಕಾದವರು ನಾವು ಮತ್ತು ನೀವು.

Leave a Reply

Your email address will not be published. Required fields are marked *
You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>